ಪುತ್ತೂರು:ಜು.26ರಂದು ರಾತ್ರಿ ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಈಗಾಗಲೇ ಯಶಸ್ವಿಯಾಗಿದೆ.ಪ್ರಕರಣದ ಮುಂದಿನ ತನಿಖೆಯನ್ನು ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ)ಕ್ಕೆ ಸಹಕರಿಸಲು ಇಬ್ಬರು ಎಸ್‌ಐಗಳು ಹಾಗೂ 7 ಮಂದಿ ಪೊಲೀಸರನ್ನು ನಿಯೋಜಿಸಿ ಎಡಿಜಿಪಿ ಡಾ|ಎಮ್.ಎ.ಸಲೀಂ ಆದೇಶ ಹೊರಡಿಸಿದ್ದಾರೆ.
ಪುತ್ತೂರು ಗ್ರಾಮಾಂತರ ಠಾಣೆಯ ಪಿ.ಎಸ್.ಐ ಉದಯರವಿ, ಕಾರ್ಕಳ ಗ್ರಾಮಾಂತರ ಠಾಣಾ ಪಿಎಸ್‌ಐ ಎಂ.ಎಸ್ ಪ್ರಸನ್ನ, ವೇಣೂರು ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಪ್ರವೀಣ್ ಎಮ್, ಪುತ್ತೂರು ಗ್ರಾಮಾಂತರ ಠಾಣೆಯ ಹೆಡ್‌ಕಾನ್‌ಸ್ಟೇಬಲ್‌ಗಳಾದ ಅದ್ರಾಮ ಹಾಗೂ ಪ್ರವೀಣ್ ರೈ, ವಿಟ್ಲ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಉದಯ ರೈ, ಬಂಟ್ವಾಳ ಸಂಚಾರಿ ಠಾಣೆಯ ವಿವೇಕ್ ರೈ ಮತ್ತು ಕುಮಾರ್, ಸುಳ್ಯ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಅನಿಲ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಒಂದು ತಿಂಗಳ ಅವಧಿಗೆ ಎನ್.ಐ.ಎಗೆ ಓಒಡಿ ಮೂಲಕ ನೇಮಕಗೊಳಿಸಿ ಆಡಳಿತ ವಿಭಾಗದ ಎಡಿಜಿಪಿ ಡಾ|ಎಂ.ಎ.ಸಲೀಂ ಅವರು ಆದೇಶಿಸಿರುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಣೆ `ಸುದ್ದಿ’ಗೆ ತಿಳಿಸಿದ್ದಾರೆ.
ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈಗಾಗಲೇ 10 ಮಂದಿ ಆರೋಪಿಗಳನ್ನು ಬಂಧಿಸಿದ್ದು ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಂಡಿದೆ.