ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 12 ವರ್ಷಗಳ ಹಿಂದೆ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಮತ್ತು ಸಿದ್ದಕಟ್ಟೆಗೆ ಮಂಜೂರಾಗಿದ್ದ 108 ಆಂಬುಲೆನ್ಸ್ ವಾಹನವನ್ನು ಸದ್ದಿಲ್ಲದೇ ಬೇರೆಡೆಗೆ ವರ್ಗಾಯಿಸಿದ್ದು, ತಕ್ಷಣ ಮರು ಸೇವೆ ಆರಂಭಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪ್ರಭಾಕರ ಪ್ರಭು ಆಗ್ರಹಿಸಿದ್ದಾರೆ.
ಈ ಆಂಬುಲೆನ್ಸ್ನಿಂದ ಸಿದ್ದಕಟ್ಟೆ ಸುತ್ತಮುತ್ತಲಿನ 12-15 ಗ್ರಾಮಗಳ ಗ್ರಾಮೀಣ ಜನರಿಗೆ ಆಕಸ್ಮಿಕ ಮತ್ತು ತುರ್ತು ಆರೋಗ್ಯ ಸೇವೆಗೆ ದೂರದ ಆಸ್ಪತ್ರೆಗೆ ತೆರಳಲು ಅನುಕೂಲವಾಗಿತ್ತು. ಆದರೆ ಇತ್ತೀಚೆಗೆ ಯಾವುದೇ ಕಾರಣ ನೀಡದೆ ವಾಹನವನ್ನು ವರ್ಗಾಯಿಸಲಾಗಿದೆ. ಅಧಿಕಾರಿಗಳನ್ನು ವಿಚಾರಿಸಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ, ಸಿಬ್ಬಂದಿ ಕೊರತೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ವಾಹನ ಇಲ್ಲದ ಕಾರಣ ತುರ್ತು ಸಂದರ್ಭದಲ್ಲಿ ಸಕಾಲದಲ್ಲಿ ಆಸ್ಪತ್ರೆಗೆ ತಲುಪಲಾಗದೆ ತೊಂದರೆ ಅನುಭವಿಸುವಂತಾಗಿದೆ. ಕೆಲವು ಸಂದರ್ಭದಲ್ಲಿ ಸಾವು ಸಂಭವಿಸಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.ಆದ್ದರಿಂದ ಸಿದ್ದಕಟ್ಟೆಗೆ ಮಂಜೂರಾಗಿದ್ದ 108 ಆಂಬುಲೆನ್ಸ್ ಸೇವೆಯನ್ನು ತಕ್ಷಣ ಮುಂದುವರಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಅವರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.








