ಬಂಟ್ವಾಳ: ಕೆಲಸ ಬಿಟ್ಟು ಮನೆಗೆ ತೆರಳಲೆಂದು ಬಿ.ಸಿ.ರೋಡಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ಸಿನಲ್ಲಿ ಕುಳಿತಿದ್ದ ಯುವತಿ ಕಕ್ಯೆಪದವಿನ ಕೊಡಂಗೆ ನಿವಾಸಿ ಲಾವಣ್ಯ ಗೌಡಳನ್ನು ಅಟ್ಟಾಡಿಸಿ ತಲವಾರಿನಿಂದ ಹತ್ಯೆಗೈದ ಆರೋಪಿ ಚೇತನ್ ಗೌಡನನ್ನು ಪೊಲೀಸರು ಮಂಗಳವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿರುವುದಾಗಿ ತಿಳಿದು ಬಂದಿದೆ.
ಆರೋಪಿ ಚೇತನ್ಗೌಡನನ್ನು ಸಂಜೆ 5.30ರ ವೇಳೆಗೆ ಬಂಟ್ವಾಳ ಉಪವಿಭಾಗದ ಎಎಸ್ಪಿ ಯಶ್ಕುಮಾರ್ ಶರ್ಮಾ ಅವರ ಉಪಸ್ಥಿತಿಯಲ್ಲಿ ಬಂಟ್ವಾಳ ನಗರ ಪೊಲೀಸರು ಕೊಲೆ ನಡೆದ ಸ್ಥಳವಾದ ಬಿ.ಸಿ.ರೋಡಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಕರೆತಂದು ಸ್ಥಳ ಮಹಜರು ನಡೆಸಿ ಆರೋಪಿಯಿಂದ ವಿವರಣೆ ಪಡೆದರು. ಕಳೆದ ಜುಲೈ 16ರಂದು ಗುರುವಾರ ಆರೋಪಿ ಇದೇ ಸಮಯಕ್ಕೆ ಯುವತಿ ಲಾವಣ್ಯ ಗೌಡಳನ್ನು ಹತ್ಯೆ ನಡೆಸಿದ್ದ. ಕಕ್ಯೆಪದವಿಗೆ ತೆರಳುವ ಬಸ್ ಕೂಡ ಈ ದಿನ ಅದೇ ಸ್ಥಳದಲ್ಲಿ ನಿಲುಗಡೆಯಾಗಿತ್ತು.








