ಮುಳಿಯ ಮ್ಯಾನೇಜ್ಡ್ ಫಾರ್ಮ್‌ಲ್ಯಾಂಡ್ ಪ್ರಾಯೋಜಕತ್ವದಲ್ಲಿ ಜೂ.5,6,7ರಂದು ಹಲಸು ಮೇಳ-2026

0

ಬಂಟ್ವಾಳ: ಹಲಸು ಹಣ್ಣು…. ಇದು ಕೇವಲ ಹಣ್ಣಲ್ಲ. ಇದೊಂದು ಸಂಭ್ರಮ. ಕರುನಾಡಿನ ಮಣ್ಣಿನ ವಾಸನೆ, ಹಳ್ಳಿಯ ಸೊಗಡು ಮತ್ತು ಅಪ್ಪಟ ದೇಶೀ ರುಚಿಯನ್ನು ಸಾರುವ ಪುತ್ತೂರಿನ ಪ್ರತಿಷ್ಟಿತ ಸಂಸ್ಥೆ ʼನವತೇಜ ಟ್ರಸ್ಟ್ʼ ಪ್ರಸ್ತುತಪಡಿಸುವ ವರ್ಷದ ʼಹಲಸು ಹಣ್ಣು ಮೇಳ-2026ʼ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿದೆ.

ಮಾರುಕಟ್ಟೆಯಲ್ಲಿ ವಿದೇಶಿ ಹಣ್ಣುಗಳ ಆರ್ಭಟದ ಈ ಕಾಲದಲ್ಲಿ ನಮ್ಮ ನೆಲದ 2ನೇ ಕಲ್ಪವೃಕ್ಷವಾದ ಹಲಸಿಗೆ ಮರುಜೀವ ನೀಡುವಲ್ಲಿ ಈ ಮೇಳಗಳ ಪಾತ್ರ ಬಹಳ ದೊಡ್ಡದು. ನವನೀತ ಫಾರ್ಮ್ ನರ್ಸರಿ, ಅಕ್ಷ ಕಾಟೇಜ್‌ ಇಂಡಸ್ಟ್ರೀಸ್‌, ಮರಿಕೆ ಸಾವಯವ ಮಳಿಗೆ ಆಯೋಜನೆಯಲ್ಲಿ, ಕ್ಯಾಂಪ್ಕೋ ಲಿಮಿಟೆಡ್, ಗ್ರಾಮಜನ್ಯ, ಭಟ್‌ ಎನ್ ಭಟ್‌, ವಿಜಯ ಸೋಲಾರ್‌, ಎಸ್‌ ಆರ್‌ ಕೆ ಲ್ಯಾಡರ್ಸ್‌, ಭಾರತ್‌ ಆಟೋ ಕಾರ್, ಮತ್ತು ರಾಧಾಸ್‌, ಶೇಟ್‌ ಇಲೆಕ್ಟ್ರಾನಿಕ್ಸ್‌ ಪ್ರೋತ್ಸಾಹದೊಂದಿಗೆ, ಅಡಿಕೆ ಪತ್ರಿಕೆ, “ಸಮೃದ್ಧಿ” ಗಿಡಗೆಳತನ ಸಂಘ, JCI ಪುತ್ತೂರು ನಿಯೋ ಪ್ರೈಂ, ನಿರ್ಮಾಣ್‌ ಅಸೋಸಿಯೇಟ್ಸ್‌, ಪಶುಪತಿ ಇಲೆಕ್ಟ್ರಿಕಲ್ಸ್‌ ಮತ್ತು ಸುದಾನ ರೆಸಿಡೆನ್ಸಿಯಲ್‌ ಸ್ಕೂಲ್‌ ಸಹಕಾರದೊಂದಿಗೆ ಮುಳಿಯ‌ ಮ್ಯಾನೇಜ್ಡ್ ಫಾರ್ಮ್‌ಲ್ಯಾಂಡ್ ಪ್ರಾಯೋಜಕತ್ವದಲ್ಲಿ ಈ ಬಾರಿ ಜೂನ್‌ 5,6,7ರಂದು ನಗರದ ಕಿಲ್ಲೆ ಮೈದಾನದಲ್ಲಿ ಹಲಸು ಹಣ್ಣಿನ ಮೇಳ ನಡೆಯಲಿದ್ದು, ಭರದ ಸಿದ್ದತೆ ನಡೆಯುತ್ತಿದೆ. ಮ್ಯಾನೇಜ್ಡ್ ಫಾರ್ಮ್‌ಲ್ಯಾಂಡ್ಸ್ ಎಂಬುದು ರಿಯಲ್ ಎಸ್ಟೇಟ್ ಮತ್ತು ಕೃಷಿಯ ಸಂಯೋಜನೆಯ ಹೊಸ ಪರಿಕಲ್ಪನೆ. ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿರುವ ಈ ವಿಷಯದ ಕುರಿತು ಹಣ್ಣು ಮೇಳದಲ್ಲಿ ಸಂವಾದ ಮತ್ತು ಮಾಹಿತಿ ವಿನಿಮಯ ನಡೆಯಲಿದೆ.

ಹಣ್ಣುಗಳ, ಖಾದ್ಯಗಳ ಪ್ರಪಂಚ-ಗೇರು ಹಣ್ಣಿನ ಮೌಲ್ಯ ವರ್ಧಿತ ಉತ್ಪನ್ನಗಳು ಈ ಮೇಳದ ಹೈಲೈಟ್
ಮೇಳದಲ್ಲಿ ಮೂಗಿಗೆ ಬಡಿಯುವ ಹಲಸಿನ ಘಮ, ಹುಣಸೂರು, ಸಕರಾಯ ಪಟ್ಟಣ, ದೊಡ್ಡ ಬಳ್ಳಾಪುರದ ರುಚಿಯಾದ ಹಲಸಿನ ಹಣ್ಣುಗಳು, ಸಿದ್ದು, ಶಂಕರ, ಸರ್ವಋತು ಸೇರಿದಂತೆ ಹತ್ತಾರು ತಳಿಯ ಹಲಸಿನ ಹಣ್ಣುಗಳು, ಗ್ರಾಹಕರನ್ನು ಕೈ ಬೀಸಿ ಕರೆಯುವ ಕೆಂಪು, ಹಳದಿ ತೊಳೆಯ ಜೇನಿನ ರುಚಿಯ ಹಲಸಿನ ಹಣ್ಣುಗಳನ್ನು ನೋಡುವುದು ಒಂದು ಅಂದವಾದರೆ, ತಿನ್ನುವುದರ ಮಜವೇ ಬೇರೆ. ಇನ್ನು ಸ್ಥಳೀಯ, ಅಲ್ಲದೇ ಬ್ರಹ್ಮಾವರ, ಚನ್ನಪಟ್ಟಣ, ರಾಮನಗರ ಸೇರಿದಂತೆ ಸ್ಥಳೀಯ ಉತ್ಕೃಷ್ಟ ಮಾವಿನ ಹಣ್ಣುಗಳು ಈ ಮೇಳದಲ್ಲಿ ಲಭ್ಯವಿರಲಿದೆ. ಹಲಸು ಎಂದರೆ ಕೇವಲ ಹಣ್ಣಲ್ಲ ಎಂಬುವುದನ್ನು ಈ ಮೇಳಗಳು ಕಳೆದ ಕೆಲವು ವರ್ಷಗಳಿಂದ ಸಾಬೀತು ಪಡಿಸುತ್ತಿದೆ. ಇಲ್ಲಿ ಸಿಗುವ ವೈವಿಧ್ಯಮಯ ಹಲಸಿನ ಹಣ್ಣಿನ, ಮತ್ತಿತರ ಖಾದ್ಯಗಳು ಜನರನ್ನು ಬೆರಗುಗೊಳಿಸುತ್ತದೆ. ಮೇಳದಲ್ಲಿ ಈಗಾಗಲೇ ಜನಮಾನಸದಿಂದ ಮರೆಯಾದ, ಮರೆವಿನಂಚಿನಲ್ಲಿರುವ ಸ್ಥಳೀಯ ಪಾರಂಪರಿಕ ತಿಂಡಿಗಳನ್ನು ತಯಾರಿಸುವ ಯೋಜನೆ ರೂಪಿಸಲಾಗಿದ್ದು, ಹಳಸಿನ ತಳಿಗಳನ್ನು ಅಭಿವೃದ್ಧಿಪಡಿಸಿದ ಪ್ರಸಿದ್ಧ ನರ್ಸರಿಗಳಿಂದ ಗಿಡಗಳ ಪ್ರದರ್ಶನ ಹಾಗೂ ವಿವಿಧ ಹಣ್ಣುಗಳ ಬೆಳೆಗಳ ಮಾರಾಟವೂ ಇಲ್ಲದೆ. ಹಲಸು ಹಣ್ಣು ಮೇಳದ ಕೊನೆಯ ದಿನವಾದ ಜೂ.7ರಂದು ಹಲಸು ಮತ್ತು ಮಾವಿನ 25 ಬಗೆಯ ವೈವಿಧ್ಯ ಖಾದ್ಯಗಳಿಂದ ಕೂಡಿದ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ಟಿಕೆಟ್‌ ಕಾಯ್ದಿರಿಸಿದ 250 ಮಂದಿಗೆ ಭೋಜನ ಸವಿಯುವ ಅವಕಾಶವಿದೆ.

ಗೇರು ಹಣ್ಣಿನ ಜ್ಯೂಸ್‌, ಈ ಬಾರಿಯ ವಿಶೇಷ ಆಕರ್ಷಣೆಯಾಗಿರಲಿದ್ದು, ಇದರೊಂದಿಗೆ ಹಲ್ವಾ, ಉಪ್ಪಿನಕಾಯಿ, ಐಸ್‌ ಕ್ರೀಂ, ಸುಕಾಜು, ಹಪ್ಪಳ, ಸಂಡಿಗೆ, ಚಿಪ್ಸ್‌, ಪಾಯಸ, ಕಡುಬು, ಇಡ್ಲಿ, ಹೋಳಿಗೆ, ದೋಸೆ, ಮಂಚೂರಿ, ಕಬಾಬ್‌, ಮುಳುಕ್ಕ, ಸೊಳೆರೊಟ್ಟಿ, ಕೇಕ್‌, ಅತಿರಸ, ಸೇಮಿಗೆ, ಬನ್ಸ್‌,ಪಲಾವು, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಹಳಸಿನ ಬೀಜದಿಂದ ತಯಾರಿಸಿದ ಚಟ್ನಿ ಪುಡಿ ಇಲ್ಲಿ ಲಭ್ಯವಿರಲಿದೆ. ಇದರ ಜೊತೆಗೆ ಈ ಋತುವಿನಲ್ಲಿ ಸಿಗುವ ರಂಬುಟಾನ್‌, ಡ್ರಾಗನ್‌ ಫ್ರೂಟ್‌, ಮ್ಯಾಂಗೋಸ್ಟಿನ್‌ ಬೆಣ್ಣೆ ಹಣ್ಣು ಮುಂತಾದ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯಲಿದೆ. ವಿಶೇಷ ಆಹಾರ ಮಳಿಗೆ, ಅಗ್ರಿ ಬಿಸ್‌ನೆಸ್‌ ಮಳಿಗೆಗಳು,ಹಲಸು ಕೃಷಿಕರ ಅನುಭವದ ಮಾತು, ಹೊಸ ತಳಿಗಳ ಪರಿಚಯವೂ ಇಲ್ಲಿ ಹೆಜ್ಜೆ ಹೆಜ್ಜೆಗೂ ನಿಮ್ಮನ್ನು ಆಕರ್ಷಿಸಲಿದೆ, ರೈತರ ಮತ್ತು ಗ್ರಾಹಕರ ನೇರ ಸಂಪರ್ಕ ಹಲಸು ಹಣ್ಣು ಮೇಳದ ಮುಖ್ಯ ಉದ್ದೇಶವಾಗಿದ್ದು, ರೈತರು ತಾವು ಬೆಳೆದ ಹಣ್ಣುಗಳನ್ನು ನೇರವಾಗಿ ಜನರಿಗೆ ಇಲ್ಲಿ ತಲುಪಿಸಬಹುದಾಗಿದೆ. ಹಲಸು ಹಣ್ಣು ಮೇಳ ಅನ್ನುವುದು ಕೇವಲ ವ್ಯಾಪಾರ ಕೇಂದ್ರವಾಗದೆ ಹಲಸು ಮತ್ತು ಇತರ ಹಣ್ಣುಗಳನ್ನು ಬೆಳೆಯುವ ತಾಂತ್ರಿಕತೆ ಮತ್ತದರ ಉಪಯುಕ್ತತೆ ಬಗ್ಗೆ ಮಾಹಿತಿ ನೀಡುವ ಜ್ಞಾನಕೇಂದ್ರವೂ ಹೌದು. ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹಲಸು ಹಣ್ಣುಗಳ ಬಗ್ಗೆಗಿನ ರಸಪ್ರಶ್ನೆ ಕಾರ್ಯಕ್ರಮ ಈ ವರ್ಷದ ಮೇಳದ ಹೈಲೈಟ್‌ ಆಗಿರಲಿದೆ.


ಸ್ಥಳೀಯ ಸಕಾಲಿಕ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ, ಪ್ರಾದೇಶಿಕ ವೈವಿಧ್ಯಮಯ ಆಹಾರ ಮೇಳ , ಕೃಷಿ ಉದ್ಯಮ ಮಳಿಗೆಗೆಳು, ಕೃಷಿ ವಿಚಾರ ವಿನಿಮಯ, ಮನೋರಂಜನಾ ಸ್ಪರ್ಧೆಗಳು, ಹಣ್ಣು, ತೋಟಗಾರಿಕೆ ಮತ್ತು ಗಾರ್ಡನ್ ಗಿಡಗಳು,ಬೀಜಗಳು, ಆಹಾರೋತ್ಪನ್ನ ಮಳಿಗೆಗಳು ಮತ್ತು ಉದ್ಯಮ ಮಳಿಗೆಗಳು

ಆರೋಗ್ಯದ ದೃಷ್ಟಿಯಿಂದ ಹಲಸು ಹಣ್ಣು ಪೋಷಕಾಂಶಗಳ ಗಣಿ ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಜೀರ್ಣ ಕ್ರೀಯೆಗೆ ಉತ್ತಮ. ಮಧುಮೇಹಿಗಳಿಗೂ ಪೂರಕವಾದ ಕೆಲವು ಹಲಸಿನ ಉತ್ಪನ್ನಗಳು ಇಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆ. ಸಂಶೋಧನಾ ಕೇಂದ್ರಗಳು ಹಾಗೂ ಕೃಷಿಕರನ್ನು ಒಂದೇ ಸೂರಿನಡಿ ತಂದು ಕೃಷಿ ಉತ್ಪನ್ನಗಳಿಗೆ ಉದ್ಯಮದ ಸ್ವರೂಪ ನೀಡುವ ಯತ್ನವೂ ಮೇಳದ ಉದ್ದೇಶಗಳಲ್ಲೊಂದು. ನಮ್ಮ ಕೃಷಿ ಸಂಸ್ಕೃತಿಯನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಈ ಹಲಸು ಹಣ್ಣಿನ ಮೇಳಗಳು ಅತ್ಯಗತ್ಯವಾಗಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ವಿವಿಧ ರಂಗದ ಗಣ್ಯರು, ಕೃಷಿಕರು ಈ ಮೇಳದಲ್ಲಿ ಭಾಗವಹಿಸಲಿದ್ದಾರೆ. ಪಶ್ಚಿಮಘಟ್ಟದ ತಪ್ಪಲಿನಿಂದ ಹಿಡಿದು ಬಯಲು ಸೀಮೆಯವರೆಗೂ ಹಲಸಿನ ಹಣ್ಣಿನ ಕಂಪು ಹರಡಲು ಹೊರಟಿರುವ ನವತೇಜ ಸಂಸ್ಥೆಯ ಕಾರ್ಯ ಶ್ಲಾಘನೀಯ. ನಮ್ಮ ಮಣ್ಣಿನ, ಹಲಸಿನ ಹಣ್ಣಿನ ರುಚಿ ಸವಿಯಲು ತಯಾರಾಗಿರಿ. ಎಲ್ಲರಿಗೂ ಮುಕ್ತ ಪ್ರವೇಶವಿದೆ.

ಮಾಹಿತಿಗೆ ಸಂಪರ್ಕಿಸಿ: 97312 44378 / 94805 35708‌

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here