ಬಂಟ್ವಾಳ: ಹಕ್ಕುಪತ್ರಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ – ಬಿಜೆಪಿ ಸಾಥ್, ತಹಶೀಲ್ದಾರ್ ಭೇಟಿ

0

ಬಂಟ್ವಾಳ: ಪುಣಚ ಗ್ರಾಮದ 3ನೇ ವಾರ್ಡ್‌ನ ದೇವಿನಗರದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಹಲವು ವರ್ಷಗಳಿಂದ ವಾಸದ ಮನೆಗೆ ಹಕ್ಕುಪತ್ರ ನೀಡದೆ ಅಲೆದಾಡಿಸಲಾಗುತ್ತಿದೆ ಎಂದು ಆರೋಪಿಸಿ ಮೂರು ಮನೆಯ ಸದಸ್ಯರು ಹಾಗೂ ಸಂಬಂಧಿಕರು ಬಂಟ್ವಾಳ ತಾಲೂಕು ಕಚೇರಿ ಎದುರು ಸೋಮವಾರ ಬೆಳಗ್ಗಿನಿಂದ ಆರಂಭಿಸಿದ್ದ ಅಹೋರಾತ್ರಿ ಮೌನ ಪ್ರತಿಭಟನೆ ಮಂಗಳವಾರವೂ ಮುಂದುವರಿಯಿತು.

ಹಕ್ಕುಪತ್ರಕ್ಕಾಗಿ ಮನವಿ ಸಲ್ಲಿಸಿದ್ದ ಬೇಬಿ ಕುಮಾರಿ, ವಿಜಯಲಕ್ಷ್ಮಿ, ಪ್ರೇಮ ಹಾಗೂ ಮನೆ ಮಂದಿ ಸೇರಿ ಸುಮಾರು 15 ಮಂದಿ ಧರಣಿ ನಡೆಸುತ್ತಿದ್ದು, ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕ ನೇತೃತ್ವ ವಹಿಸಿದ್ದರು.

ಬಿಜೆಪಿ ಬೆಂಬಲ
ಮಂಗಳವಾರ ಬೆಳಗ್ಗೆ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಪುತ್ತೂರು ಮತ್ತು ಬಂಟ್ವಾಳ ಕ್ಷೇತ್ರಗಳ ಬಿಜೆಪಿ ಮುಖಂಡರು, ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಬೆಳಗ್ಗಿನಿಂದ ಸಂಜೆಯವರೆಗೂ ಪ್ರತಿಭಟನಾನಿರತರ ಜತೆಗೆ ಬೆಂಬಲವಾಗಿ ನಿಂತು ಹೋರಾಟದಲ್ಲಿ ಭಾಗವಹಿಸಿದರು.

ತಹಶೀಲ್ದಾರ್ ಭೇಟಿ
ಮಧ್ಯಾಹ್ನ ಬಂಟ್ವಾಳ ತಹಸೀಲ್ದಾರ್ ಮಂಜುನಾಥ್ ಅವರು ಭೇಟಿ ನೀಡಿ, ಪುತ್ತೂರು ಶಾಸಕರು ಸ್ವತಃ ಕಾರ್ಯಕ್ರಮದ ಮೂಲಕ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವುದಾಗಿ ತಿಳಿಸಿದರು. ಇದಕ್ಕೆ ಬಿಜೆಪಿ ಮುಖಂಡರ ಸಹಿತ ಪ್ರತಿಭಟನಾನಿರತರು ಆಕ್ಷೇಪ ವ್ಯಕ್ತಪಡಿಸಿ ಮತ್ತೆ ಧರಣಿ ಕುಳಿತರು. ಸಂಜೆಯವರೆಗೂ ಪ್ರತಿಭಟನೆ ಮುಂದುವರಿಯಿತು.

ಪ್ರತಿಭಟನೆಯಲ್ಲಿ ವಿಕಾಸ್ ಪುತ್ತೂರು, ಆರ್. ಚೆನ್ನಪ್ಪ ಕೋಟ್ಯಾನ್, ಸಂದೇಶ್ ಶೆಟ್ಟಿ ಅರೆಬೆಟ್ಟು, ರಾಜೇಶ್ ಬನ್ನೂರು, ದೇವಪ್ಪ ಪೂಜಾರಿ ಬಾಳಿಕೆ, ದಿನೇಶ್ ಅಮೂರು, ಪ್ರಸನ್ನ ಮಾರ್ತ, ಪುನೀತ್ ಮಾಡತ್ತಾರು, ಪುರುಷೋತ್ತಮ ಮುಂಗ್ಲಿಮನೆ, ನಿತೇಶ್ ಶಾಂತಿವನ, ಹರಿಪ್ರಸಾದ್ ಯಾದವ್ ಸೇರಿದಂತೆ ಬಿಜೆಪಿ ಮುಖಂಡರು ಹಾಜರಿದ್ದರು.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here