ಬಂಟ್ವಾಳ: ಅನುಗ್ರಹ ಮಹಿಳಾ ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿನಿ ವಿಟ್ಲ ಸಮೀಪದ ಕಾನತ್ತಡ್ಕ ನಿವಾಸಿ ಅಬ್ದುಲ್ ರಝಕ್ – ಆಯಿಷಾ ದಂಪತಿಗಳ ಸುಪುತ್ರಿ ರೀಹಾ ಹವ್ವಾ. ತಮ್ಮ ಪರಿಶ್ರಮ ಮತ್ತು ಶಿಸ್ತುಬದ್ಧ ಜೀವನ ಶೈಲಿಯಿಂದ ಪದವಿ ಪೂರ್ವ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ತೋರಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇಕಡಾ 97.5 ಅಂಕಗಳನ್ನು ಪಡೆದು ಅವರು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ನಿಶ್ಚಿತ ಗುರಿಯನ್ನು ಹೊಂದಿ ಅದನ್ನು ಸಾಧಿಸಲು ದೃಢಸಂಕಲ್ಪ ಮತ್ತು ನಿರಂತರ ಪ್ರಯತ್ನ ಅಗತ್ಯವೆಂಬುದನ್ನು ರೀಹಾ ಅವರು ತಮ್ಮ ಸಾಧನೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.
ಕಾಲೇಜಿನ ಎಲ್ಲರ ಮೆಚ್ಚಿನ ವಿದ್ಯಾರ್ಥಿನಿಯಾದ ರೀಹಾ ಹವ್ವಾ ಅವರ ವಿನಯ, ವಿಧೇಯತೆ ಮತ್ತು ಅಧ್ಯಯನದ ಮೇಲಿನ ಆಸಕ್ತಿ ಎಲ್ಲರ ಗಮನ ಸೆಳೆಯುತ್ತದೆ. ದೈನಂದಿನ ಪಾಠವನ್ನು ಅದೇ ದಿನದಲ್ಲಿ ಅಧ್ಯಯನ ಮಾಡುವ ಹವ್ಯಾಸವೇ ಅವರ ಯಶಸ್ಸಿನ ಮುಖ್ಯ ಗುಟ್ಟು. ಶಿಸ್ತು ಮತ್ತು ಸಮಯಪಾಲನೆಯಿಂದಲೇ ಅವರಿಗೆ ಶ್ರೇಷ್ಠ ಫಲಿತಾಂಶವನ್ನು ಸಾಧಿಸಲು ಸಾಧ್ಯವಾಯಿತು. ಮೀಫ್ ಸಂಘಟನೆಯ ಮೂಲಕ ಯೆನೆಪೋಯ ವಿದ್ಯಾಸಂಸ್ಥೆಯಲ್ಲಿ ಅವರು ಉಚಿತ ನೀಟ್ ಕೋಚಿಂಗ್ ಗೆ ತಪ್ಪದೆ ಹಾಜರಾಗುತ್ತಿದ್ದು, ಪಿ.ಯು.ಸಿ. ಫಲಿತಾಂಶದ ದಿನ ಕೂಡ ಅವರು ದಿನಚರಿಯನ್ನು ತಪ್ಪಿಸಲಿಲ್ಲ. ಅವರ ನಿಷ್ಠೆಯನ್ನು ಗಮನಿಸಿದ ಯಾನೆಪೋಯ ಸಂಸ್ಥೆಯ ಅಧಿಕೃತರು, ಅಗತ್ಯ ಕಂಡುಬಂದಲ್ಲಿ ದೀರ್ಘಾವಧಿ ನೀಟ್ ತರಬೇತಿಯನ್ನು ಉಚಿತವಾಗಿ ನೀಡಿ ರೀಹಾರವರ ಡಾಕ್ಟರ್ ಆಗುವ ಕನಸನ್ನು ನನಸು ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದು ಅವರ ಮುಂದಿನ ಗುರಿ ಸಾಧನೆಗೆ ಇನ್ನಷ್ಟು ಉತ್ತೇಜನ ನೀಡುತ್ತದೆ.
ರಸಾಯನಶಾಸ್ತ್ರ ಪರೀಕ್ಷೆಯ ದಿನದಂದೇ ಅವರ ಅಜ್ಜಿ ಮರಣ ಹೊಂದಿದಾಗಲೂ ಭಾರವಾದ ಹೃದಯದೊಂದಿಗೆ ಹೆತ್ತವರ ಪ್ರೋತ್ಸಾಹದಿಂದ ಪರೀಕ್ಷೆಗೆ ಹಾಜರಾದರು. ರೀಹಾ ಹವ್ವಾ ಅವರ ಸಾಧನೆಯ ಹಿಂದೆ ಅನುಗ್ರಹ ಮಹಿಳಾ ಕಾಲೇಜಿನ ಮೌಲ್ಯಾಧಾರಿತ ಶಿಕ್ಷಣ ಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ರೀಹಾ ತುಂಬಾ ವಿನಯದಿಂದ ನೆನಪಿಸಿಕೊಳ್ಳುತ್ತಾರೆ. ಮೌಲ್ಯ ಶಿಕ್ಷಣಕ್ಕೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಪರಿಶ್ರಮ ಮತ್ತು ನೈತಿಕತೆಯನ್ನು ಬೆಳೆಸುವುದರಲ್ಲಿ ಪ್ರಮುಖ ಪಾತ್ರವಿದೆ. ರೀಹಾ ಅವರ ಸಾಧನೆ ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಿದ್ದು, ಮುಂದಿನ ದಿನಗಳಲ್ಲಿ
ಅವರು ಇನ್ನಷ್ಟು ಉನ್ನತ ಶಿಖರಗಳನ್ನು ಏರಲಿ ಎಂಬುದು ಎಲ್ಲರ ಪ್ರಾರ್ಥನೆಯಾಗಿದೆ.








