ಬಂಟ್ವಾಳ: ವಿಷಕಾರಿ ಹಾವು ಕಚ್ಚಿ ಯುವಕನೋರ್ವ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಸಜೀಪಮೂಡ ಗ್ರಾಮದಲ್ಲಿ ನಡೆದಿದೆ.
ಸುಭಾಷ್‌ನಗರ ನಿವಾಸಿ ಜಗದೀಶ್ ಹಾವು ಕಡಿತಕ್ಕೊಳಗಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಜೀಪಮೂಡದ ಮನೆಯೊಂದರಲ್ಲಿ ವಿಷಕಾರಿ ಕನ್ನಡಿ ಹಾವೊಂದು (ಪಿಲಿಕಂದಡಿ) ಬಂದಿದ್ದು, ಇದನ್ನು ಹಿಡಿಯಲು ಬಂದಿದ್ದ ಜಗದೀಶ್ ಹೆಬ್ಬಾವಿನ ಮರಿಯೆಂದು ತಿಳಿದು ಯಾವುದೇ ಸುರಕ್ಷಾ ಕ್ರಮ ವಹಿಸದೇ ಕೈಯಲ್ಲಿ ಹಿಡಿಯಲು ಹೋದಾಗ ಹಾವು ಕೈಗೆ ಕಚ್ಚಿದೆ. ಹಾವನ್ನು ಹಿಡಿದು ಅರಣ್ಯಕ್ಕೆ ಬಿಟ್ಟು ಬಂದ ಬಳಿಕ ಜಗದೀಶ್ ದೇಹ ಅಸ್ವಸ್ಥಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.








