ಬಂಟ್ವಾಳ: ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ‘ಯುವ ಮನಸ್ಸುಗಳೊಂದಿಗೆ ಮುಕ್ತ ಸಂವಾದ’ ಕಾರ್ಯಕ್ರಮ ನಡೆಯಿತು. ಅತಿಥಿ ಕರ್ನಾಟಕ ರಾಜ್ಯ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ. ಎ ಗಫೂರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶಿಸ್ತು, ಸಹನೆ, ಹಿರಿಯರೊಂದಿಗೆ ಗೌರವಯುತವಾಗಿ ವರ್ತಿಸುವುದು ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಎತ್ತರಕ್ಕೆ ಬೆಳೆಸುವಲ್ಲಿ ಸಹಕಾರಿಯಾಗುತ್ತದೆ,ಇಂದಿನ ಆಧುನಿಕ, ತಾಂತ್ರಿಕ ಸಮಾಜದಲ್ಲಿ ಅಂತರ್ಜಾಲ, ಗ್ರಂಥಾಲಯ, ಶಿಕ್ಷಣ ಕ್ಷೇತ್ರ ಇವುಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಯಾಸಿನ್ ಬೇಗ್ ಮಾತನಾಡಿ, ಸರಕಾರದಿಂದ ಸಿಗುವ ಅವಕಾಶ, ಸೌಕರ್ಯಗಳು, ಹಾಗೂ ಸಹಾಯ ನಿಧಿಯನ್ನು ದೊರಕಿಸಿಕೊಟ್ಟರೆ ನಾವು ಅದಕ್ಕೆ ಅಭಾರಿಯಾಗಿರುತ್ತೇವೆ ಎಂದು ಕಾರ್ಯಕ್ರಮದ ಗೌರವಾನ್ವಿತ ಅತಿಥಿಯಾಗಿ ಆಗಮಿಸಿದ ಎಂ. ಎ ಗಫೂರ್ ರವರಿಗೆ ಹೇಳಿದರು.
ವೇದಿಕೆಯಲ್ಲಿ ಅನುಗ್ರಹ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಖಜಾಂಜಿ ಹೈದರ್ ಅಲಿ ಅನುಗ್ರಹ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ. ಹೇಮಲತ ಬಿ.ಡಿ ,ಸಲಹಾ ಸಮಿತಿಯ ಕಾರ್ಯದರ್ಶಿ ತಾರಾಕ್ಷಿ , ಪದವಿ ವಿಭಾಗದ ಸಂಯೋಜಕಿ ಆಬಿದಾ. ಬಿ, ಸಲಹಾ ಸಮಿತಿಯ ಸದಸ್ಯರು ಹಾಗೂ ಮೌಲ್ಯ ಶಿಕ್ಷಣ ವಿಭಾಗದ ಮುಖ್ಯಸ್ಥೆ ಸಲೀಮಾರವರು ಉಪಸ್ಥಿತರಿದ್ದರು.

ಕಾಲೇಜಿನಲ್ಲಿ ನಡೆಸಿದ ರೀಲ್ಸ್ ಮೇಕಿಂಗ್ ಸ್ಪರ್ಧೆಯಲ್ಲಿ ವಿಜೇತರಾದ ತಂಡದವರಿಗೆ ಅತಿಥಿಯವರಿಂದ ಬಹುಮಾನವನ್ನು ವಿತರಿಸಲಾಯಿತು.
ಬೋಧಕ -ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡರು. ದ್ವಿತೀಯ ಬಿ.ಕಾಂ ವಿಭಾಗದ ವಿದ್ಯಾರ್ಥಿನಿ ಆಯಿಶತ್ತುಲ್ ಸೆಮಿನ ಕಿರಾತ್ ಪಠಿಸಿದರು,ಪ್ರಥಮ ಬಿ.ಕಾಂ ವಿಭಾಗದ ವಿದ್ಯಾರ್ಥಿನಿ ಶೈಮಾ ಪರ್ವೀನ್ ಸ್ವಾಗತಿಸಿದರು,ಪ್ರಥಮ ಬಿ.ಕಾಂ ವಿಭಾಗದ ವಿದ್ಯಾರ್ಥಿನಿ ಆಶಿಕ ಶಿಯಾನ ಅತಿಥಿ ಪರಿಚಯವನ್ನು ಮಾಡಿದರು, ತೃತೀಯ ಬಿ.ಕಾಂ ವಿಭಾಗದ ವಿದ್ಯಾರ್ಥಿನಿ ಮಶಿದ ಕಾರ್ಯಕ್ರಮವನ್ನು ವಂದಿಸಿ,ನಿರೂಪಿಸಿದರು.









