ಬಂಟ್ವಾಳ: ಮಸೀದಿ ವಿಚಾರಕ್ಕೆ ಸಂಬಂಧಿಸಿ ಇತ್ತಂಡಗಳ ನಡುವೆ ಹೊಡೆದಾಟ ನಡೆದು ಜೀವಬೆದರಿಕೆಯೊಡ್ಡಿದ್ದ ಘಟನೆಗೆ ಸಂಬಂಧಿಸಿ ದೂರು, ಪ್ರತಿದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣ ದಾಖಲಾಗಿದೆ.
ಸಜಿಪ ಪಡು ನಿವಾಸಿ ಅಬ್ದುಲ್ ನವಾಝ್ ಎಂಬವರ ದೂರಿನಂತೆ, ಮಾ.22 ರಂದು ಬೆಳಿಗ್ಗೆ, ದೂರುದಾರರು ಮತ್ತು ಅವರ ಸಂಬಂಧಿ ದಾವೂದ್ ಜೊತೆಯಲ್ಲಿ ತಲೆಮೊಗರು ಮಸೀದಿಗೆ ಹೋಗಿ ವಾಪಾಸ್ಸು ಬರುತ್ತಿರುವಾಗ ಮಸೀದಿಗೆ ಸಂಬಂಧಿಸಿದ ಕಟ್ಟಡದಲ್ಲಿರುವ ಶೌಕತ್ ಎಂಬಾತನ ಅಂಗಡಿಯ ಬಳಿ ಆರೋಪಿತರಾದ ಶೌಕತ್, ಇಸಾಕ್, ಸಫಿಕ್, ಯಾಕೂಬ್, ಮಹಮ್ಮದ್ ಮುಸ್ತಫಾ, ನಾಸಿರ್ ಹಾಗೂ ನಿಝಾಲ್ ಗುಂಪು ಕಟ್ಟಿಕೊಂಡು ಅಬ್ದುಲ್ ನವಾಝ್ ಹಾಗೂ ದಾವೂದ್ ಸ್ಥಳಕ್ಕೆ ಬಂದಾಗ ಆರೋಪಿಗಳು ಮಸೀದಿಯ ವಿಚಾರದಲ್ಲಿ ತಕರಾರು ತೆಗೆದು, ಅವ್ಯಾಚವಾಗಿ ನಿಂದಿಸಿ, ಕತ್ತಿ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿ ತೆರಳಿರುತ್ತಾರೆ. ಹಲ್ಲೆಯಿಂದಾದ ಗಾಯಕ್ಕೆ ಇಬ್ಬರು ಗಾಯಾಳುಗಳು ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಸಜಿಪ ಪಡು ನಿವಾಸಿ ಅಬ್ದುಲ್ ಗಫೂರ್ ಎಂಬವರು ನೀಡಿದ ಪ್ರತಿದೂರಿನಂತೆ, ಯಾಕೂಬ್, ಶಫೀಕ್, ಇಸಾಕ್,ಸಫ್ವಾನ್, ಅಶ್ರಫ್ ಸಾಹೇಬ್ ಎಂಬವರುಗಳು ಸಜಿಪ ಪಡು ಗ್ರಾಮದ ತಲೆಮೊಗರು ಮಸೀದಿ ಬಳಿ ದೂರುದಾರರನ್ನು ತಡೆದು ನಿಲ್ಲಿಸಿ ಅವ್ಯಾಚವಾಗಿ ಬೈದು, ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ್ದಾರೆ. ಹಲ್ಲೆಯಿಂದಾದ ಗಾಯಕ್ಕೆ ದೂರುದಾರ ಅಬ್ದುಲ್ ಗಫೂರ್ ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಸಜಿಪ ಪಡು ನಿವಾಸಿ ಶೌಕತ್ ಆಲಿ ಎಂಬವರು ನೀಡಿದ ದೂರಿನಂತೆ, ಸಜೀಪಪಡು ಗ್ರಾಮದ ತಲೆಮೊಗರು ಮಸೀದಿ ಬಳಿಯ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದಾಗ, ದಾವೂದ್ , ಜುಬೈರ್, ಸೈದುದ್ದೀನ್, ನವಾಜ್, ಗಫೂರ್ , ಶರೀಪ್, ಆಶಿಕ್ ಅಂಗಡಿಗೆ ಬಂದು, ಮಸೀದಿ ವಿಚಾರದಲ್ಲಿ ತಕರಾರು ತೆಗೆದು ದೂರುದಾರರ ಸಂಬಂಧಿ ರಬಿಯತ್ ರವರಿಗೆ ಹಲ್ಲೆ ನಡೆಸಿರುತ್ತಾರೆ. ಈ ವೇಳೆ ಗಲಾಟೆ ಬಿಡಿಸಲು ಬಂದ ಸಫಾನಾ, ನಿಜಾಲ್ , ಇಸಾಕ್, ಆಶ್ರಫ್ ಎಂಬವರಿಗೂ ಹಾಗೂ ದೂರುದಾರರಿಗೂ ಅವ್ಯಾಚವಾಗಿ ಬೈದು ತಲವಾರಿನಿಂದ ಹಲ್ಲೆಗೆ ಯತ್ನಿಸಿದ್ದು ಈ ವೇಳೆ ಗಲಾಟೆ ಬಿಡಿಸಲು ಬಂದ ಶೌಕತ್ ಅಲಿ ಸಂಬಂಧಿ ಆಯಿಷಾ ಎಂಬವರಿಗೆ ಆರೋಪಿಗಳು ಜೀವಬೆದರಿಕೆ ಒಡ್ಡಿದ್ದಾರೆ. ಈ ಮೂರು ದೂರಿನ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಾಳುಗಳು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.








