ಗುಡ್ಡೆಯಂಗಡಿ ಓಂ ಜನ ಹಿತಾಯ ಆಂಗ್ಲ ಮಾಧ್ಯಮ ಶಾಲೆ: ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ

0

ರಕ್ತದಾನಿಗಳಾಗಿ ಜೀವ ಉಳಿಸುವ ಕಾರ್ಯದಲ್ಲಿ ಭಾಗಿಗಳಾಗಿ: ಡಾ| ಆಂಟನಿ


ಬಂಟ್ವಾಳ: ಅರಳ ಗ್ರಾಮದ ಗುಡ್ಡೆಯಂಗಡಿ ಓಂ ಜನಹಿತಾಯ ಆಂಗ್ಲ ಮಾಧ್ಯಮ ಶಾಲೆ, ಅರಳ ನವಶಕ್ತಿ ಯುವಕ ಮಂಡಲ, ಕೆ.ಎಂ.ಸಿ.ಆಸ್ಪತ್ರೆ ಮಂಗಳೂರು, ವೆನ್‌ಲಾಕ್ ಸರಕಾರಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ಗುಡ್ಡೆಯಂಗಡಿ ಓಂ ಜನಹಿತಾಯ ಆಂಗ್ಲ ಮಾಧ್ಯಮ ಶಾಲೆಯ ವಠಾರದಲ್ಲಿ ಬುಧವಾರ ನಡೆಯಿತು.


ಶಾಲಾ ಸಂಸ್ಥಾಪಕ ಶಾಂತಾರಾಮ ಶೆಟ್ಟಿ ಅವರು ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮಂಗಳೂರು ವೆನ್‌ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತ ನಿಧಿ ವಿಭಾಗ ಮುಖ್ಯಸ್ಥ ಡಾ.ಆಂಟನಿ ಅವರು ಮಾತನಾಡಿ, ರಕ್ತದಾನದ ಬಗ್ಗೆ ಅಪಪ್ರಚಾರ ಸಲ್ಲದು. ರಕ್ತದಾನಕ್ಕೆ ಅರ್ಹರಾದವರು ಯಾರೂ ರಕ್ತದಾನ ಮಾಡಬಹುದು. ಇದರಿಂದ ದಾನಿಗಳಿಗೂ ರಕ್ತದ ಅಗತ್ಯವುಳ್ಳವರಿಗೂ ಬಹಳ ಸಹಕಾರಿಯಾಗುವುದು ಎಂದು ಹೇಳಿದರು. ಪ್ರಸ್ತುತ ರಕ್ತ ಶೇಖರಣೆಯಿಂದಾಗಿ ರೋಗಿಗಳಿಗೆ ರಕ್ತದ ಕೊರತೆಯಾಗುತ್ತಿಲ್ಲ. ಎಲ್ಲರೂ ರಕ್ತದಾನಿಗಳಾಗಿ ಜೀವ ಉಳಿಸುವ ಕಾರ್ಯದಲ್ಲಿ ಭಾಗಿಗಳಾಗಬೇಕು ಎಂದರು.


ಶಾಲಾ ಸಂಚಾಲಕ ರಂಜನ್ ಕುಮಾರ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲಾ ಸಂಸ್ಥಾಪಕ ಶಾಂತಾರಾಮ ಶೆಟ್ಟಿ ಅವರ ದೂರದೃಷ್ಠಿತ್ವದಿಂದ ಕಡಿಮೆ ವೆಚ್ಚದಲ್ಲಿ ಉನ್ನತ ಗುಣಮಟ್ಟದ ಶಾಲೆ, ವೃದ್ಧಾಶ್ರಮ ನಿರ್ಮಾಣವಾಗಿದೆ. ಹಾಗೆಯೇ ಒಂದು ಆಸ್ಪತ್ರೆ ನಿರ್ಮಿಸುವ ಕನಸು ನನಸಾಗದ್ದರಿಂದ ಪ್ರತೀವರ್ಷ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತದೆ ಎಂದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಅರ್ಜುನ್ ಭಂಡಾರ್ಕರ್ ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ಜತೆ ಮಕ್ಕಳ ಮತ್ತು ಸಿಬಂದಿಗಳ ಹಿತ ರಕ್ಷಣೆ ಮಾಡುವ ಓಂ ಜನಹಿತಾಯ ಶಿಕ್ಷಣ ಸಂಸ್ಥೆ ಅಭಿನಂದನೀಯರು ಎಂದ ಅವರು ಮುಂದಕ್ಕೆ ಪ್ರತೀವರ್ಷ ತಮ್ಮ ಸಂಸ್ಥೆಯಿಂದ ಇಬ್ಬರು ಮಕ್ಕಳ ಸಂಪೂರ್ಣ ವ್ಯಾಸಂಗ ವೆಚ್ಚ ಭರಿಸುವುದಾಗಿ ಘೋಷಿಸಿದರು.


ಈ ಸಂದರ್ಭದಲ್ಲಿ ಸಂಸ್ಥೆಯ ಮೃತ ಸಿಬಂದಿಯ ಕುಟುಂಬಕ್ಕೆ ಹಾಗೂ ಸಂಕಷ್ಟಕ್ಕೀಡಾದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಧನ ಸಹಾಯ ವಿತರಿಸಲಾಯಿತು. ಶಾಲಾ ಸಂಚಾಲಕ ಶಾಂತಾರಾಮ ಶೆಟ್ಟಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಶಾಂತಾ ಸೇವಾಂಜಲಿ ಸಾಮಾಜಿಕ ಸೇವಾ ಸಂಸ್ಥೆಯನ್ನು ಉದ್ಘಾಟಿಸಲಾಯಿತು. ಅರ್ಜುನ್ ಭಂಡಾರ್ಕಾರ್ ಅವರನ್ನು ಸಮ್ಮಾನಿಸಲಾಯಿತು. ಮಾಜಿ ಸಚಿವರಾದ ಬಿ.ರಮಾನಾಥ ರೈ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.


ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ನೇತ್ರ ತಜ್ಞೆ ಡಾ.ಪ್ರೇರಣಾ , ಮುಂಬಯಿ ನೇತ್ರ ತಜ್ಞೆ ಡಾ. ಸರಿತಾ ಶೆಟ್ಟಿ, ಅರಳ ನವಶಕ್ತಿ ಯುವಕ ಮಂಡಲದ ಆಧ್ಯಕ್ಷ ಯೋಗೀಶ್ ಕೆ., ಟ್ರಸ್ಟಿಗಳಾದ ವಿಶ್ವನಾಥ ಶೆಟ್ಟಿ, ಅತಿತಾ ಶೆಟ್ಟಿ, ವನಿತಾ ಶೆಟ್ಟಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಜಗದೀಶ ಆಳ್ವ ಅಗ್ಗೊಂಡೆ, ಸದಸ್ಯರಾದ ದೇವಪ್ಪ ಕರ್ಕೇರಾ, ಪ್ರವೀಣ್ ಆಳ್ವ,ದಿನೇಶ್ ರೈ, ನಂದರಾಮ ರೈ, ದೇವಪ್ಪ ಪೂಜಾರಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪದ್ಮನಾಭ ಮಡಿವಾಳ, ಸದಸ್ಯರಾದ ಸುಕುಮಾರ ಶೆಟ್ಟಿ, ಉದಯ ರೈ, ಲಕ್ಷ್ಮೀಧರ ಶೆಟ್ಟಿ,ಸಂಸ್ಥೆಯ ಆಡಳಿತಾಽಕಾರಿ ರಕ್ಷಾ ಆರ್.ಶೆಟ್ಟಿ, ಶಾಲಾ ಶಿಕ್ಷಕ, ಸಿಬಂದಿ ವರ್ಗ, ಶಾಲಾಭಿವೃದ್ಧಿ ಸಮಿತಿ, ಶಿಕ್ಷಕ ರಕ್ಷಕ ಸಮಿತಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಮಹೇಶ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ಮಮತಾ ವಂದಿಸಿದರು. ಶಿಕ್ಷಕಿ ರೇವತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here