ಬಂಟ್ವಾಳ: ದಿನದಿಂದ ದಿನಕ್ಕೆ ಬಿಸಿಲ ಬೇಗೆ ಹೆಚ್ಚುತ್ತಿದ್ದು, ಇಂದು (ಮಾ.12) ರಾಜ್ಯದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ವಾತಾವರಣ ಹೆಚ್ಚಾಗುವ ಸಾಧ್ಯತೆ ಇರುವುದಾಗಿ ಐಎಂಡಿ ತಿಳಿಸಿದೆ.
ಐಎಂಡಿ ಪ್ರಕಾರ, ಕೆಲವು ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಇರುವ ತಾಪಮಾನಕ್ಕಿಂತ ಅಧಿಕವಾಗಿರಲಿದೆ ಎಂದು ತಿಳಿಸಿದೆ. ಈ ನಿಟ್ಟಿನಲ್ಲಿ ಅಧಿಕ ತಾಪಮಾನದ ಜಿಲ್ಲೆಗಳಲ್ಲಿನ ಜನರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹವಾಮಾನ ಇಲಾಖೆ ಮನವಿ ಮಾಡಿಕೊಂಡಿದೆ.
ಐಎಂಡಿ ಮಾಹಿತಿ ಪ್ರಕಾರ, ದಕ್ಷಿಣ ಕನ್ನಡದಲ್ಲಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ, ಕಲಬುರಗಿ ಮತ್ತು ಉತ್ತರ ಕನ್ನಡದಲ್ಲಿ 36.6 ಡಿಗ್ರಿ ಸೆಲ್ಸಿಯಸ್ ತಾಪಮಾನ, ಹಾವೇರಿ 36.4 ಡಿಗ್ರಿ, ಬಾಗಲಕೋಟ, ಬೆಳಗಾವಿ, ಶಿವಮೊಗ್ಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ತಿಳಿಸಿದೆ.








