ಬಂಟ್ವಾಳ: ತಾಲೂಕಿನ ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ನೂಜಿಯಲ್ಲಿ ಕಾರ್ಯಾಚರಿಸುತ್ತಿದ್ದ ಸಿಡಿಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿದ ಘಟನೆ ನಡೆದಿದೆ.
ಕಳೆದ ಹಲವಾರು ವರುಷಗಳಿಂದ ಅಬ್ದುಲ್ ಗಫೂರ್ ಎಂಬಾತ ಸ್ಥಳೀಯ ಜಾಗವೊಂದರಲ್ಲಿ ಸಿಡಿಮದ್ದು ತಯಾರಿಕೆ ಮಾಡುತ್ತಿದ್ದರು. ಈ ಘಟಕದಲ್ಲಿ ಸಿಡಿಮದ್ದಿಗೆ ಬೇಕಾದ ರಾಸಾಯನಿಕವನ್ನು ಮಿಶ್ರಣ ಮಾಡಿ ಕಾರ್ಮಿಕರು ಸಂಜೆಯ ಕಾಫಿ ಕುಡಿಯುವ ಸಲುವಾಗಿ ತೆರಳುತ್ತಿದ್ದ ಸಂದರ್ಭ ಏಕಾಏಕಿ ಘಟಕ ಸ್ಫೋಟಗೊಂಡಿದೆ. ಸ್ಪೋಟದ ತೀವ್ರತೆಗೆ 5 ಸೆಂಟ್ಸ್ ಜಾಗ ಸಂಪೂರ್ಣ ಹಾನಿಯಾಗಿದೆ. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆಯಿಂದಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಬೆಂಕಿಹತ್ತಿಕೊಂಡ ಹಿನ್ನೆಲೆ ನೀರು ಹಾಕಿ ಬೆಂಕಿ ಆರಿಸುವ ಕಾರ್ಯವನ್ನು ಮಾಡಲಾಯಿತು. ಘಟನೆಯಿಂದಾಗಿ ಆಸುಪಾಸಿನ ಕೆಲವು ಮನೆಗಳಿಗೆ ಹಾನಿಯಾಗಿರುವುದಾಗಿ ಮಾಹಿತಿ ಲಭಿಸಿದೆ.
ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕ ರವಿ, ವಿಟ್ಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗ, ವಿಟ್ಲ ಠಾಣಾ ಎಸ್.ಐ. ರಾಮಕೃಷ್ಣ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಘಟಕದಲ್ಲಿ ಪಟಾಕಿ ಸಿಡಿದು ಭಾರೀ ಸ್ಫೋಟಗೊಂಡ ಘಟನೆ ನಡೆದಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.
ಆರೋಪಿ ಅಬ್ದುಲ್ ಗಫೂರ್ ಪೊಲೀಸ್ ವಶಕ್ಕೆ
ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿ ಸುಡುಮದ್ದು ತಯಾರಿಸಿ, ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ಅಕ್ರಮವಾಗಿ ದಾಸ್ತಾನಿರಿಸಿದ್ದ ಸುಡುಮದ್ದುಗಳು ಸ್ಪೋಟಗೊಂಡಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಪೊಲೀಸರು ಆರೋಪಿ ಅಬ್ದುಲ್ ಗಫೂರ್ ಎಂಬಾತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ವಿಟ್ಲಮುಡ್ನೂರು ಗ್ರಾಮದ ಪ್ರಭಾರ ಗ್ರಾಮ ಆಡಳಿತಾಧಿಕಾರಿಯೂ ಆಗಿರುವ ಅಳಿಕೆ ಗ್ರಾಮದ ಗ್ರಾಮ ಆಡಳಿತ ಅಧಿಕಾರಿ ಸತೀಶ್ ಸುವರ್ಣ ಅವರು ಪೊಲೀಸರಿಗೆ ದೂರು ನೀಡಿದ್ದರು.`ದಿನಾಂಕ 06-03-2026 ರಂದು ಸಂಜೆ, ಬಂಟ್ವಾಳ ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ನೂಜಿ ಎಂಬಲ್ಲಿ ಸುಡುಮದ್ದು ಸ್ಪೋಟಗೊಂಡಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಕಂದಾಯ ನಿರೀಕ್ಷಕ ರವಿ ಎಂಬವರೊಂದಿಗೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಸದ್ರಿ ಸ್ಥಳದಲ್ಲಿರುವ ಸರಕಾರಿ ಜಮೀನಿನಲ್ಲಿ, ಸ್ಥಳೀಯ ನಿವಾಸಿಯಾದ ಅಬ್ದುಲ್ ಗಫೂರ್ ಎಂಬಾತ ಅಕ್ರಮವಾಗಿ ಶೆಡ್ ನಿರ್ಮಿಸಿ, ಯಾವುದೇ ಪರವಾನಗಿ ಪಡೆಯದೇ ಸುಡುಮದ್ದುಗಳನ್ನು ತಯಾರಿಸಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯತನದಿಂದ ಮತ್ತು ಬೇಜವಾಬ್ದಾರಿಯಿಂದ ಅಕ್ರಮವಾಗಿ ದಾಸ್ತಾನಿರಿಸಿದ್ದ ಸುಡುಮದ್ದುಗಳು ಸ್ಪೋಟಗೊಂಡಿರುವುದಾಗಿದೆ. ಸ್ಫೋಟದ ಪರಿಣಾಮ ಸುತ್ತಮುತ್ತಲಿನ ಮರಗಳು ಸುಟ್ಟು ಹೋಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿರುವುದಿಲ್ಲ” ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಕಲಂ:9B Thd explosives act 1884 act & 288 BNSರಂತೆ ಪ್ರಕರಣ(ಅ.ಕ್ರ.58/2026)ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಆರೋಪಿತ ಅಬ್ದುಲ್ ಗಫೂರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2017ರಲ್ಲಿ ಇದೇ ಘಟಕದಲ್ಲಿ ಸ್ಪೋಟ ನಡೆದಿತ್ತು
2017 ಮಾ.20ರಂದು ಸಂಜೆ ಸಮಯ ಅಮೋನಿಯಮ್ ನೈಟ್ರೇಟ್ ಹಾಗೂ ಗಂಧಕದ ಮಿಶ್ರಣ ಮಾಡುತ್ತಿದ್ದ ಸಂದರ್ಭ ಏಕಾಏಕಿ ಸ್ಪೋಟಗೊಂಡ ಹಿನ್ನೆಲೆ ಅಲ್ಲಿದ್ದ ಕಾರ್ಮಿಕರ ಪೈಕಿ ಇಬ್ಬರ ದೇಹ ಛಿದ್ರಗೊಂಡಿತ್ತು. ಹಲವು ಮನೆ, ಅಂಗಡಿಗಳಿಗೆ ಹಾನಿಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಇನ್ನೂ ಇತ್ಯರ್ಥವಾಗಿಲ್ಲ. ಇದೀಗ ಅದರ ಸಮೀಪವೇ ಮತ್ತೊಂದು ಘಟನೆ ಸಂಭವಿಸಿದೆ.








