ಬಂಟ್ವಾಳ: ಕಟಪಾಡಿ–ಉಳ್ಳಾಲ ಅಬ್ಬಕ್ಕ ಸರ್ಕಲ್ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ತಾ.ಪಂ. ಮಾಜಿ ಸದಸ್ಯ ಪ್ರಭಾಕರ ಪ್ರಭು ಮಂಗಳೂರು ಸಂಸದ ಬ್ರಿಜೇಶ್ ಚೌಟ, ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಅವರಿಗೆ ಮನವಿ ಮಾಡಿದ್ದಾರೆ.
ಕಟಪಾಡಿ–ಉಳ್ಳಾಲ ಅಬ್ಬಕ್ಕ ಸರ್ಕಲ್ ರಸ್ತೆಯು (ಎಸ್.ಹೆಚ್ 300) ರಾಜ್ಯ ಹೆದ್ದಾರಿಯಾಗಿದ್ದು, ಕಟಪಾಡಿಯಿಂದ ಪ್ರಾರಂಭಗೊಂಡು ಕಾರ್ಕಳ ಮಾರ್ಗವಾಗಿ ಮೂಡಬಿದ್ರಿ,ಸಿದ್ದಕಟ್ಟೆ,ಬಂಟ್ವಾಳ ಮಾರ್ಗವಾಗಿ ಮೆಲ್ಕಾರ್, ಮುಡಿಪು ಮೂಲಕ ಉಳ್ಳಾಲ ಅಬ್ಬಕ್ಕ ಸರ್ಕಲ್ ವರೆಗಿನ ರಾಜ್ಯ ಹೆದ್ದಾರಿಯಲ್ಲಿ ದಿನಂಪ್ರತಿ ಲಕ್ಷಾಂತರ ವಾಹನಗಳು ಸಂಚರಿಸುತ್ತಿದ್ದು, ರಸ್ತೆಯು ಅಲ್ಲಲ್ಲಿ ತಿರುವುಗಳಿಂದ ಕೂಡಿದ್ದು ವಾಹನಗಳ ಸಂಚಾರಕ್ಕೆ ಬೇಕಾದಷ್ಟು ಅಗಲೀಕರಣ ಇರುವುದಿಲ್ಲ. ಈ ರಸ್ತೆಯು ಈ ಹಿಂದೆ ಎರಡು ಬಾರಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸುವ ಕುರಿತು ಕೇಂದ್ರ ಸಚಿವರಾದ ನಿತಿನ್ ಗಡ್ಕರಿಯಿಂದಲೂ ಘೋಷಣೆಗೊಂಡು ಶಂಕು ಸ್ಥಾಪನೆ ಸಹ ಆಗಿರುತ್ತದೆ ಎಂದು ತಿಳಿದು ಬಂದಿದೆ. ಬಳಿಕ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಆಸಕ್ತಿ ವಹಿಸದೇ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ ಘೋಷಣೆ ಅನುಷ್ಟಾನಕ್ಕೆ ಬಾರದೇ ರಾಜ್ಯ ಹೆದ್ದಾರಿಯಾಗಿಯೇ ಮುಂದುವರಿದಿದೆ. ಈ ರಾಜ್ಯ ಹೆದ್ದಾರಿ (ಎಸ್.ಹೆಚ್ 300) ಯಲ್ಲಿ ಮುಖ್ಯವಾಗಿ ಬಂಟ್ವಾಳ ಮೂಡಬಿದ್ರಿ ರಸ್ತೆಯು ಕಿರಿದಾಗಿದ್ದು, ಅಲ್ಲಲ್ಲಿ ತುಂಬಾ ತಿರುವುಗಳು ಇರುವುದರಿಂದ ಸುಗಮ ಮತ್ತು ವೇಗ ಸಂಚಾರಕ್ಕೆ ಆಡಚಣೆಯಾಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಕಟಪಾಡಿ –ಉಳ್ಳಾಲ ಅಬ್ಬಕ್ಕ ಸರ್ಕಲ್ ರಾಜ್ಯ ಹೆದ್ದಾರಿ (ಎಸ್.ಹೆಚ್ 300) ಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಸಿ ಆದೇಶ ಹೊರಡಿಸಬೇಕೆಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.








